ಡೆಲವೇರ್ ಇಂಡಿಯನರು
	ಅಲ್ಗಾನ್‍ಕೀಯನ್ ಬುಡಕಟ್ಟಿಗೆ ಸೇರಿದ ರೆಡ್ ಇಂಡಿಯನ್ ಜನ. ಹಿಂದೆ ಉತ್ತರ ಅಮೆರಿಕದ ಪೂರ್ವತೀರದಲ್ಲಿ ಹೆನ್‍ಲೋಪನ್ ಭೂಶಿರದಿಂದ ಹಿಡಿದು ಲಾಂಗ್ ಐಲೆಂಡ್ ವರೆಗಿನ ಪ್ರದೇಶವನ್ನು ಆಕ್ರಮಿಸಿಕೊಂಡಿದ್ದರು. ಇವರ ಭಾಷೆ ಅಲ್ಗಾನ್‍ಕೀಯನ್ ನುಡಿಗೆ ಸೇರಿದ್ದು, ರೆಡ್ ಇಂಡಿಯನ್ ಜನರ ಮೂಲ ಸಂತತಿಗೆ ಸೇರಿದವರೆಂದು ಹೇಳಿಕೊಳ್ಳುವ ಇವರು ತಮ್ಮನ್ನು ಲೆನ್ನಿ ಲೆನಾಪೀ (ಪರಿಶುದ್ಧರು) ಎಂದು ಹೇಳಿಕೊಳ್ಳುತ್ತಾರೆ. ಮೇರಿಲ್ಯಾಂಡಿನ ನಂಟಿಕೋಕ್ ಹಾಗೂ ಹಡ್ಸನ್ ನದಿಭಾಗದ ಮೊಹಿಕನ್ ಇಂಡಿಯನ್ ಗುಂಪಿನವರು ಇವರನ್ನು ಪಿತಾಮಹರು ಎಂದು ಗೌರವಿಸುತ್ತಾರೆ. ಡೆಲವೇರ್ ಇಂಡಿಯನರಲ್ಲಿ ಯುನಾಮಿ (ಕೂರ್ಮ), ಮುನ್ಸೀ (ತೋಳ), ಉನಲಚ್‍ಟೆಗೊ (ಟರ್ಕಿ ಕೋಳಿ) ಎಂಬ ಮೂರು ಸರ್ವಚೇತನ ಪಂಥಗಳಿವೆ. ಪ್ರತಿ ಪಂಥಕ್ಕೂ ಅದರದೇ ಆದ ಬೇಟೆಯ ಸ್ಥಳಗಳಿವೆ. 

	ಈ ಜನ ಅಮೆರಿಕದ ಅಟ್ಲಾಂಡಿಕ್ ತೀರದಲ್ಲಿ ಏಕೆ ನೆಲೆಸಿದ್ದರೆಂಬುದಕ್ಕೆ ಮಾಹಿತಿಗಳಿಲ್ಲ. ಪ್ರಾಚ್ಯವಸ್ತು ಸಂಶೋಧನೆಗಳಿಂದ ಇವರು ಕ್ರಿ.ಶ. 1000ದಲ್ಲಿ ಅಲ್ಲಿಗೆ ಬಂದಿರಬೇಕೆಂದು ಊಹಿಸಲಾಗಿದೆ. ವಿಲಿಯಂ ಪೆನ್ (1644-1718) ಪೆನ್ಸಿಲ್ವೇನಿಯ ವಸಾಹತು ಸ್ಥಾಪಿಸಿದಾಗ (1682) ಇವರು ಆತನೊಂದಿಗೆ ಹೊಂದಿಕೊಂಡು ಆತನ ಸ್ನೇಹ ಸಂಪಾದಿಸಿದ್ದರು. ಕ್ರಮೇಣ ಇರಕ್ವಾಯಿ ಇಂಡಿಯನರ ಪ್ರಾಬಲ್ಯ ಹಾಗೂ ಬಿಳಿಯರ ಉಪದ್ರವ ಹೆಚ್ಚಾಗಿ ಈ ಜನ ಹಂತ ಹಂತಗಳಲ್ಲಿ ಪಶ್ಚಿಮ ಪೆನ್ಸಿಲ್ವೇನಿಯ, ಟೆಕ್ಸಾಸ್, ಕ್ಯಾನ್ಸಾಸ್, ಒಹಾಯೊ, ಇಂಡಿಯಾನ, ಮಿಸೂರಿ ಪ್ರದೇಶಗಳಿಗೆ ವಲಸೆ ಹೋದರು. ಅಮೆರಿಕ ಸ್ವಾತಂತ್ರ್ಯಸಂಗ್ರಾಮ ಕಾಲದಲ್ಲಿ (1755-83) ಇವರು ಕೆಲಕಾಲ ಅಮೆರಿಕನರ ನೆರವಿಗೆ ನಿಂತು ಕೊನೆಗೆ ಇಂಗ್ಲಿಷರ ಪಕ್ಷ ವಹಿಸಿದರು. 1867ರಲ್ಲಿ ಇವರು ಇಂಡಿಯನ್ ಮೀಸಲು ಪ್ರದೇಶದಿಂದ ಚೆರಕೀ ಇಂಡಿಯನ್ ಪ್ರಾಂತ್ಯಕ್ಕೆ ವಲಸೆ ಹೋದರು. 1795ರ ಗ್ರೀನ್‍ವಿಲ್ ಒಪ್ಪಂದದ ಪ್ರಕಾರ ತಮ್ಮ ಒಹಾಯೊ ಬೇಟೆ ಪ್ರದೇಶವನ್ನು ಅಮೆರಿಕನರಿಗೆ ಬಿಟ್ಟುಕೊಟ್ಟರು. 17 ಹಾಗೂ 18ನೆಯ ಶತಮಾನಗಳಲ್ಲಿ ಮೊರಾವೀಯನ್ ಪಾದ್ರಿಗಳ ಪ್ರಭಾವದಿಂದ ಇವರಲ್ಲಿ ಹಲವರು ಕ್ರೈಸ್ಥಧರ್ಮಕ್ಕೆ ಸೇರಿದರು. ಈಗ ಇವರು ಬಹುತೇಕ ಓಕ್ಲಹೋಮದಲ್ಲಿ ನೆಲೆಸಿದ್ದಾರೆ. ಕ್ಯಾನ್ಸಾಸ್, ವಿಸ್‍ಕಾನ್‍ಸಿನ್ ಹಾಗೂ ಆಂಟೇರಿಯೋ ಭಾಗಗಳಲ್ಲಿ ಇವರು ಸಣ್ಣ ತಂಡಗಳಾಗಿ ಅಲ್ಲಲ್ಲಿ ನೆಲೆಸಿದ್ದಾರೆ.									(ವಿ.ಜಿ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ